ಯಮಳನಕ್ಷತ್ರಗಳು -
ತಮ್ಮ ಪರಸ್ಪರ ಗುರುತ್ವಾಕರ್ಷಣೀಯ ಕ್ಷೇತ್ರಗಳಿಂದ ಒಂದಕ್ಕೊಂದು ಬಂಧಿತಗೊಂಡಿರುವ ಜೋಡಿತಾರೆಗಳಿಗೆ ಇರುವ ಹೆಸರು (ಬೈನರಿ ಸ್ಟಾರ್ಸ್). ಯುಗ್ಮನಕ್ಷತ್ರ (ಡಬಲ್ ಸ್ಟಾರ್) ಪರ್ಯಾಯನಾಮ. ಜೋಡಿ ನಕ್ಷತ್ರ ಎಂಬ ಅರ್ಥ ಬರುವ ಹೆಸರನ್ನು ಮೊದಲಿಗೆ ಬಳಸಿದವ ಗ್ರೀಸ್-ಈಜಿಪ್ಟ್ ಖಗೋಳವಿಜ್ಞಾನಿ ಟಾಲೆಮಿ (ಕ್ರಿ.ಶ.ಸು 90-168) ಈತ ಮೊದಲಿಗೆ η ಸಜಿಟ್ಟಾರೈ (ಧನುರಾಶಿಗೆ ಸೇರಿದ ತಾರೆ) ಎಂಬ ನಕ್ಷತ್ರ ಯಮಳನಕ್ಷತ್ರವೆಂದು ತಿಳಿಸಿದ್ದ. ಯಮಳನಕ್ಷತ್ರ ವ್ಯವಸ್ಥೆಯಲ್ಲಿ ಒಂದು ನಕ್ಷತ್ರ ಇನ್ನೊಂದು ನಕ್ಷತ್ರದ ಸುತ್ತಲೂ ಪರಿಭ್ರಮಿಸುತ್ತಿರುತ್ತದೆ. ಯಮಳನಕ್ಷತ್ರಗಳ ಪ್ಯಕಿ ಕೆಲವೊಂದು ಬಹಳ ಸ್ಥಿರವೆನಿಸುವ ಚಲನೆಯನ್ನೇ ಪ್ರದರ್ಶಿಸುತ್ತದೆ. ಅಳ್ಳಕವಾಗಿ ಬಂಧಿತವಾಗಿರುವ ಕೆಲವೊಂದರಲ್ಲಿ ತನ್ನ ಇತರ ಸದಸ್ಯಕಾಯಗಳ ಸಹವಾಸದಿಂದ ದೂರವಿದ್ದು ತನ್ನದೇ ಅದ ಚಲನೆಯನ್ನು ಹೊಂದಿರುವ ಯಮಳನಕ್ಷತ್ರವೂ ಉಂಟು. ಯಾವುದೇ ದೃಗ್ಗೋಚರ ವಿಕಿರಣವನ್ನೂ ಉತ್ಸರ್ಜಿಸದಿರುವ, ಅಗೋಚರ ತಾರೆಯನ್ನು-ಅದು ಯಮಳನಕ್ಷತ್ರ ವ್ಯವಸ್ಥೆಯ ಸದಸ್ಯನೆನಿಸಿದ್ದ ಪಕ್ಷಕ್ಕೆ-ಬಲು ಸುಲಭವಾಗಿ ಗುರುತಿಸಬಹುದು. ಕೆಲವೊಂದು ಯಮಳನಕ್ಷತ್ರ ವ್ಯವಸ್ಥೆಯಲ್ಲಿಯ ನಕ್ಷತ್ರಗಳು ಒಂದಕ್ಕೊಂದು ತೀರ ಸಮೀಪದಲ್ಲಿದ್ದು ಅವನ್ನು ಅತ್ಯಂತ ಪ್ರಬಲ ಪ್ರಕಾಶೀಯ ದೂರದರ್ಶಕಗಳ ಮುಖಾಂತರವೂ ಪ್ರತ್ಯೇಕವಾಗಿ ವೀಕ್ಷಿಸುವುದು ಕಷ್ಟ ಸಾಧ್ಯ. ಮತ್ತೆ ಕೆಲವೊಂದು ಒಂದಕ್ಕೊಂದು ತೀರದೂರದಲ್ಲಿದ್ದು ಅವು ಒಂದೇ ನಕ್ಷತ್ರದಂತೆ ಕಾಣುತ್ತವೆ. ಏನೇ ಅದರೂ ಅಕಾಶದಲ್ಲಿ ಅವುಗಳ ಚಲನೆಯನ್ನು ಕುರಿತು ಹೇಳುವುದಾದರೆ ಅವು ಒಟ್ಟಿಗೆ ಚಲಿಸುತಿರುತ್ತವೆ ಎಂಬುದಂತೂ ಸ್ಪಷ್ಟ. 

	ವರ್ಗೀಕರಣ : ಬರಿಗಣ್ಣಿನಿಂದ ವೀಕ್ಷಿಸಿದಾಗ ಕೆಲವೊಂದು ಯುಮಳನಕ್ಷತ್ರ ವ್ಯವಸ್ಥೆಗಳು ಒಂದೇ ನಕ್ಷತ್ರದಂತೆ ಕಾಣಬರುವುದುಂಟು. ಅಂಥವನ್ನು ದೂರದರ್ಶಕದ ಮೂಲಕ ವಿಕ್ಷೀಸಿದಾಗ ಪ್ರಧಾನ ಉಜ್ಜ್ವಲತಾರೆ ಹಾಗೂ ಸಂಗಾತಿ ತಾರೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಕಾಣುತ್ತವೆ. ಇವನ್ನು ದೃಶ್ಯ ಯಮಳನಕ್ಷತ್ರಗಳು (ವಿಷುಯಲ್ ಬೈನರೀಸ್) ಎಂದು ಕರೆಯುವುದಿದೆ. ಬರಿಗಣ್ಣಿಗೆ ಇಂಥ ವ್ಯವಸ್ಥೆಯ ನಕ್ಷತ್ರಗಳು ಪ್ರತ್ಯೇಕವಾಗಿ ಕಾಣುವುದೂ ಉಂಟು. ಅಂಥವಲ್ಲಿ ಪ್ರಮುಖವಾದದ್ದು ಎಂದರೆ ಸಪ್ತರ್ಷಿಮಂಡಲ ಪುಂಜದ ತಾರೆ ವಶಿಷ್ಠ (ಮೈಜóರ್). ಇದೊಂದು ಯಮಳ ನಕ್ಷತ್ರವ್ಯವಸ್ಥೆ. ರಿಚಿಯೋಲಿ ಎಂಬ ಖಗೋಳವಿಜ್ಞಾನಿ ಇದನ್ನು ಮೊದಲಿಗೆ (1651) ಅವಿಷ್ಕರಿಸಿದ. ಈ ಯುಗ್ಮದ ಘಟಕಗಳು ಒಂದಕ್ಕೊಂದು 14.5 ಅಂತರದಲ್ಲಿದೆ. ಈ ವ್ಯವಸ್ಥೆಯಿಂದ ಅರುಂಧತಿ ನಕ್ಷತ್ರ (ಅಲ್ಕೋರ್) 700 ಅಂತರದಲ್ಲಿದೆ. ಇದೊಂದು ಯಮಳ ನಕ್ಷತ್ರ. ಈ ಎರಡೂ ಯಮಳಗಳು ಸೇರಿ ಇನ್ನೊಂದು ಯಮಳವಾಗಿದೆ.

	ಕೆಲವು ಯಮಳವ್ಯವಸ್ಥೆಗಳಲ್ಲಿ, ಮಂದಪ್ರಕಾಶದ ತಾರೆ ಇನ್ನೊಂದು ತಾರೆಗೆ ತೀರ ಸಮೀಪದಲ್ಲಿದ್ದು ಎರಡೂ ನಕ್ಷತ್ರಗಳು ಅವುಗಳ ಉಭಯಸಾಮಾನ್ಯ ಗುರುತ್ವಕೇಂದ್ರದ ಸುತ್ತ ಪರಿಭ್ರಮಿಸುವುದು ಉಂಟು. ಇಂಥವನ್ನು ನಿಜ ಯಮಳಗಳು (ಟ್ರೂ ಬೈನರೀಸ್) ಇಲ್ಲವೆ ನಿಜಯುಗ್ಮಗಳು (ರಿಯಲ್ ಡಬಲ್ಸ್) ಎಂದು ಕರೆಯುವುದಿದೆ. ಇವುಗಳ ಪೈಕಿ ಅತಿ ಉಜ್ಜ್ವಲ ತಾರೆಗೆ ಪ್ರಾಥಮಿಕ ತಾರೆಯೆಂದೂ (ಪ್ರೈಮರಿ) ಮತ್ತೊಂದಕ್ಕೆ ದ್ವಿತೀಯಕ ತಾರೆಯೆಂದೂ (ಸೆಕೆಂಡರಿ) ಹೆಸರು. ದಕ್ಷಿಣಾಕಾಶದ ಲುಬ್ಧಕ (ಸಿರಿಯಸ್) ಮತ್ತು ಕ್ಷುದ್ರಶ್ವಾನ (ಪ್ರೋಸಿಯಾನ್) ತಾರೆಗಳು ತಲಾ ಒಂದೊಂದು ಸಂಗಾತಿತಾರೆಯನ್ನು ಹೊಂದಿವೆ. ಬಹುತೇಕ ಯುಗ್ಮತಾರೆಗಳು ನಿಜಯುಗ್ಮಗಳಾಗಿವೆ. ನಿಜಯುಗ್ಮತಾರಾ ವ್ಯವಸ್ಥೆಯ ಎರಡೂ ನಕ್ಷತ್ರಗಳು ಪರಸ್ಪರ ಪ್ರಬಲ ಗುರುತ್ವಾಕರ್ಷಣ ಅಕರ್ಷಣೆಗಳಿಗೆ ಈಡಾಗಿರುತ್ತವೆ. ಮಾತ್ರವಲ್ಲದೆ ಅಕಾಶದಲ್ಲಿ ಒಟ್ಟಿಗೆ ಚಲಿಸುತ್ತಿರುತ್ತವೆ ಕೂಡ. ಪ್ರತಿಯೊಂದು ಘಟಕವೂ ಒಂದೇ ರಾಶಿಯನ್ನು ಹೊಂದಿರುವ ಸಾಧ್ಯತೆ ಉಂಟು. ಇವುಗಳ ಪರಿಭ್ರಮಣೆಗಳನ್ನು ಕೆಪ್ಲರನ ಗ್ರಹಚಲನನಿಯಮಗಳ ಅನುಸಾರ ವಿವರಿಸಬಹುದು. ಭೌತವ್ಯವಸ್ಥೆಯಲ್ಲಿರುವ ಎರಡು ನಕ್ಷತ್ರಗಳನ್ನು ಹಿಡಿದಿಟ್ಟಿರುವ ಗುರುತ್ವಾಕರ್ಷಣ ಬಲವಾದರೊ ಆ ನಕ್ಷತ್ರಗಳ ರಾಶಿಗಳ ಮೇಲೆ ಆಧರಿಸಿರುವುದರಿಂದ, ಯಮಳ ವ್ಯವಸ್ಥೆಯಲ್ಲಿ ಮಾತ್ರ ನಾಕ್ಷತ್ರಿಕ ರಾಶಿಗಳನ್ನು ನೇರವಾಗಿ ನಿರ್ಧರಿಸಬಹುದು.	ಗೊತ್ತಿರುವ ಸುಮಾರು 65,000 ಯುಗ್ಮನಕ್ಷತ್ರಗಳ ಪೈಕಿ ಬಹುತೇಕ ನಿಜಯುಗ್ಮಗಳ ಬಗ್ಗೆ ಮಾಹಿತಿ ಗೊತ್ತಾಗಿದೆ. ಅಲ್ಪಪ್ರಮಾಣದ ಪ್ರತ್ಯೇಕತೆಯನ್ನು ಹೊಂದಿರುವ ತಾರಾಜೋಡಿಗಳು ಮತ್ತು ಪರಿಭ್ರಮಣೆಗಳಲ್ಲಿ ಶೀಘ್ರಗತಿಯನ್ನು ಪ್ರದರ್ಶಿಸಬಹುದಾದ ಜೋಡಿಗಳನ್ನು ದೊಡ್ಡ ದೂರದರ್ಶಕಗಳ ಮೂಲಕ ಮಾತ್ರ ವೀಕ್ಷಿಸಬಹುದು. ದೃಶ್ಯಯಮಳ ನಕ್ಷತ್ರಗಳ ಪೈಕಿ 2500 ಹೆಚ್ಚಿನವು ಕಕ್ಷೀಯಚಲನೆಯನ್ನು ಪ್ರದರ್ಶಿಸಿವೆ. ಸೂರ್ಯನಿಗೆ ಅತ್ಯಂತ ಸಮೀಪವಾಗಿರುವ ಅಲ್ಫಸೆಂಟಾರಿ ನಕ್ಷತ್ರ ಮೊತ್ತಮೊದಲು ಅವಿಷ್ಕರಿಸಿದ ಯುಗ್ಮನಕ್ಷತ್ರಗಳ ಪೈಕಿ ಒಂದಾಗಿತ್ತು. ಕ್ಷುದ್ರಾಶ್ವಾನ (ಪ್ರೋಸಿಯಾನ್), ಲುಬ್ಧಕ (ಸಿರಿಯಸ್), ಕ್ಯಾಸ್ಟರ್ ನಕ್ಷತ್ರಗಳು ಪ್ರಧಾನ ಯಮಳನಕ್ಷತ್ರ ವ್ಯವಸ್ಥೆಗಳು. 

	ಯಮಳನಕ್ಷತ್ರ ವ್ಯವಸ್ಥೆಯ ಒಂದು ಇಲ್ಲವೆ ಎರಡೂ ನಕ್ಷತ್ರಗಳ ರೋಹಿತ ರೇಖೆಗಳಲ್ಲಿ ಕಂಡುಬರುವ ಡಾಪ್ಲರ್‍ಸರಿಕೆಯನ್ನು (ಡಾಪ್ಲರ್ ಷಿಫ್ಟ್) ಗಮನಿಸಿಕೊಂಡು ವರ್ಗೀಕರಿಸಿರುವ ಯಮಳನಕ್ಷತ್ರ ವ್ಯವಸ್ಥೆಯಲ್ಲಿನವಕ್ಕೆ ರೋಹಿತದರ್ಶಕೀಯ ಯಮಳಗಳೆಂದು (ಸ್ಪೆಕ್ಟ್ರೋಸ್ಕೋಪಿಕ್ ಬೈನರೀಸ್) ಹೆಸರು. ನಕ್ಷತ್ರವೊಂದು ಒಂಟಿನಕ್ಷತ್ರವೆ ಯಮಳನಕ್ಷತ್ರವೆ ಎಂಬುದನ್ನು ನಿರ್ಧರಿಸಲು ರೋಹಿತ ದರ್ಶಕೀಯ ವಿಧಾನವನ್ನು ಅನುಸರಿಸುವುದಿದೆ. 

	ತನ್ನ ಸಂಗಾತಿ ನಕ್ಷತ್ರ ಹಾಗೂ ವೀಕ್ಷಕನ ನಡುವೆ ಹಾದುಹೋಗುವಾಗ ಪ್ರತಿಯೊಂದು ಸಲವೂ ಒಂದು ಇನ್ನೊಂದನ್ನು ತಾತ್ಕಾಲಿಕವಾಗಿ ಮರೆಮಾಡುವ ಪರಿಸ್ಥಿತಿಯನ್ನು ಉಂಟುಮಾಡಿಕೊಳ್ಳುವಂಥ ಕಕ್ಷೆಯನ್ನು ಹೊಂದಿರುವ ನಕ್ಷತ್ರ ವ್ಯವಸ್ಥೆಗೆ ಗ್ರಹಣಕಾರಕಯಮಳ ನಕ್ಷತ್ರ (ಎಕ್ಲಿಪ್ಸಿಂಗ್ ಬೈನರಿ) ಎಂದು ಹೆಸರು. ರೋಹಿತದರ್ಶಕೀಯ ಯಮಳನಕ್ಷತ್ರವೂ ಗ್ರಹಣಕಾರಕಯಮಳನಕ್ಷತ್ರವೇ. ಇದರ ಕಕ್ಷೆ ಭೂಮಿಗೆ (ಅಂದರೆ ವೀಕ್ಷಕನಿಗೆ) ಬಹಳಷ್ಟು ಅಂಚಿನತ್ತ ಇರುವಾಗ ಪರಿಭಮ್ರಿಸುವ ನಕ್ಷತ್ರಗಳ ನಡುವೆ ಪರಸ್ಪರ ಗ್ರಹಣಏರ್ಪಡುತ್ತದೆ. ದೂರದರ್ಶಕದ ಮೂಲಕ ವೀಕ್ಷಿಸಿದಾಗ ಯಮಳ ವ್ಯವಸ್ಥೆ ಒಂಟಿನಕ್ಷತ್ರವಾಗಿ ಕಾಣುವುದರಿಂದ, ನಕ್ಷತ್ರದಿಂದ ಹೊರಬರುವ ಬೆಳಕಿನ ಕಾಂತಿ ಕ್ರಮಾಗತ ಅವಧಿಗಳಲ್ಲಿ ಮಂದವಾಗುವ ಸಾಧ್ಯತೆ ಉಂಟು. 
	(ನೋಡಿ- ಗ್ರಹಣಕಾರಕ-ಯಮಳ-ನಕ್ಷತ್ರಗಳು) 
	 (ನೋಡಿ- ನಕ್ಷತ್ರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ